ಅಪೊಲೋನಿಯಸ್ 
	ಪೈಥಾಗೊರಾಸ್ ಪಂಥಕ್ಕೆ ಸೇರಿದ ಗ್ರೀಕ್ ತತ್ತ್ವಜ್ಞಾನಿ (ಕ್ರಿ.ಪೂ. 4-ಕ್ರಿ.ಶ. 96). ಅನೇಕ ದೇಶಗಳನ್ನು ಸುತ್ತಿ ಭಾರತಕ್ಕೂ ಬಂದು ಇಲ್ಲಿನ ದಾರ್ಶನಿಕರೊಡನೆ ಸಂಭಾಷಣೆ ನಡೆಸಿದನೆಂದು ಪ್ರತೀತಿ. ದೇಶಾಟನೆಯ ಅನಂತರ ಗ್ರೀಸ್‍ಗೆ ಹಿಂತಿರುಗಿದ. ಅಲ್ಲಿಂದ ರೋಮಿಗೆ ನಡೆದ. ಅಲೆಕ್ಸಾಂಡ್ರಿಯ, ಈಥಿಯೋಪಿಯಗಳಿಗೆ ಹೋಗಿ, ಕೆಲವು ಸಿದ್ಧಿಗಳನ್ನು ಗಳಿಸಿದುದಾಗಿ ಹೇಳಿಕೊಂಡಿದ್ದಾನೆ. ಅನೇಕ ಪವಾಡಗಳನ್ನು ಮಾಡಿ ತೋರಿಸಿದನೆಂದು ಪ್ರತೀತಿ ಇದೆ. ತುಂಬ ಪ್ರಭಾವಶಾಲಿಯಾದ ದಾರ್ಶನಿಕನಾಗಿದ್ದಿರಬಹುದೆಂದು ಊಹಿಸಲಾಗಿದೆ. ಇವನೇ ಬರೆದ ಗ್ರಂಥಗಳಾವುವೂ ದೊರೆತಿಲ್ಲ. ಇವನ ಜೀವನಚರಿತ್ರೆಯನ್ನು ಫಿಲೋಸ್ಟ್ರಾಟಸ್ ಬರೆದಿದ್ದಾನೆ (ಕ್ರಿ.ಶ. 2ನೆಯ ಶತಮಾನ). ಇದರಲ್ಲಿ ಅಪೊಲೋನಿಯಸ್ ಅಹಿಂಸಾ ವ್ರತವನ್ನು ತಾಳಿದ್ದನೆಂದೂ ಶಾಕಾಹಾರಿಯಾಗಿದ್ದನೆಂದೂ ಅಪರಿಗ್ರಹವನ್ನು ಬೋಧಿಸಿದನೆಂದೂ ಉಲ್ಲೇಖವಿದೆ. ಭಾರತದ ದರ್ಶನ ಧರ್ಮಗಳು ಇವನ ಮೇಲೆ ಪ್ರಭಾವ ಬೀರಿದುವೆಂದು ಕೆಲವು ವಿದ್ವಾಂಸರು ಅಭಿಪ್ರಾಯಪಡುತ್ತಾರೆ.									    
(ಎಂ.ವೈ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ